ಬೆಂಗಳೂರು – ವಿಧಾನಸಭೆ ಚುನಾವಣೆ ಸೋಲಿನಿಂದ ತತ್ತರಿಸಿರುವ ಬಿಜೆಪಿಯಲ್ಲಿ ನಡೆದಿರುವ ವಿದ್ಯಮಾನಗಳು, ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿವೆ. ಪಕ್ಷದ ನಾಯಕತ್ವದ ವಿರುದ್ಧವೇ ಹಲವರು ಬಂಡಾಯ ಸಾರಿದ್ದು,ಬಿಕ್ಕಟ್ಟು ಶಮನಕ್ಕೆ ಮುಂದಾಗುವಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪಕ್ಷದ ಹೈಕಮಾಂಡ್ ಮನವಿ ಮಾಡಿದೆ.
ಹೈಕಮಾಂಡ್ ಸೂಚನೆ ಮೇರೆಗೆ ದೆಹಲಿಗೆ ತೆರಳಿದ ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಮುಖಂಡರೊಂದಿಗೆ ರಾಜ್ಯದ ವಿದ್ಯಮಾನಗಳ ಕುರಿತಂತೆ ಸಮಾಲೋಚನೆ ನಡೆಸಿದರು.
ಈ ವೇಳೆ ಯಡಿಯೂರಪ್ಪ ಪಕ್ಷದಲ್ಲಿ ನಾಯಕತ್ವದ ಗೊಂದಲದಿಂದಾಗಿ ಬಿಕ್ಕಟ್ಟು ಸೃಷ್ಟಿಯಾಗಿದೆ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವ ಪ್ರಯತ್ನವನ್ನು ನಾಯಕತ್ವ ಮಾಡುತ್ತಿಲ್ಲ ಇದು ಹೊಸದಾಗಿ ಆಯ್ಕೆಯಾಗಿರುವ ಶಾಸಕರು ಸೇರಿದಂತೆ ಎಲ್ಲರಿಗೂ ಬೇಸರ ತರಿಸಿದೆ ಇಂತಹ ಸಮಯದಲ್ಲಿ ಪಕ್ಷಕ್ಕೆ ಹೊಸ ಚೈತನ್ಯ ತಂದುಕೊಡಬಲ್ಲ ನಾಯಕತ್ವದ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್ ಗಮನಹರಿಸಬೇಕಿದೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಪಕ್ಷದ ರಾಜ್ಯ ಘಟಕವು ಸೇರಿದಂತೆ ಎಲ್ಲಾ ಘಟಕಗಳ ಪುನರ್ ರಚನೆ ಆಗಬೇಕಿದೆ ಲೋಕಸಭಾ ಚುನಾವಣೆ ದೃಷ್ಟಿಯಿಂದ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಬೇಕು ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಅಣಿಗೊಳಿಸಬೇಕಿದೆ ತಿಳಿಸಿದ್ದಾರೆ.
ಪಕ್ಷ ಪುನರ್ ಸಂಘಟನೆಯ ಸಮಯದಲ್ಲಿ ಸಾಮಾಜಿಕ ನ್ಯಾಯ ಪಾಲನೆ ಜೊತೆಗೆ ಪ್ರಬಲ ಸಮುದಾಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಒಂದು ವಲಯದಲ್ಲಿ ಪಕ್ಷ ಪ್ರಬಲ ಸಮುದಾಯವನ್ನು ಕಡೆಗಣಿಸುತ್ತಿದೆ ಎಂಬ ಅಭಿಪ್ರಾಯ ಮೂಡಿದೆ. ಇದನ್ನು ದೂರ ಮಾಡುವ ನಿಟ್ಟಿನಲ್ಲಿ ನಾಯಕತ್ವ ಕೆಲಸ ಮಾಡಬೇಕಿದೆ ಎಂದು ಹೇಳಿರುವ ಅವರು ಈ ನಿಟ್ಟಿನಲ್ಲಿ , ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯ ಸಚೇತಕರಾಗಿ ಸುನಿಲ್ ಕುಮಾರ್ ಅವರನ್ನು ನೇಮಕ ಮಾಡಬೇಕು ವಿಧಾನ ಪರಿಷತ್ತಿಗೆ ಪ್ರತಿಪಕ್ಷ ನಾಯಕರಾಗಿ ಶಶಿಲ್ ನಮೋಶಿ ಅಥವಾ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ನೇಮಕ ಮಾಡುವಂತೆ ಸಲಹೆ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಪಕ್ಷದ ಅಧ್ಯಕ್ಷರಾಗಿ ಹಿರಿಯ ನಾಯಕ ಆರ್.ಅಶೋಕ್ ಅಥವಾ ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ ಅವರನ್ನು ನೇಮಕ ಮಾಡಬೇಕು ಎಂದು ಹೇಳಿದ್ದು,ಉನ್ನತ ಹುದ್ದೆಗೆ ಪ್ರಭಾವಿ ಸಮುದಾಯಕ್ಕೆ ಸೇರಿದ ಅನುಭವಿ ಹಿರಿಯರನ್ನು ನೇಮಕ ಮಾಡಬೇಕು.ಪ್ರಚೋದನಾಕಾರಿ ಹೇಳಿಕೆ ನೀಡುವವರ ಬಾಯಿಗೆ ಲಗಾಮು ಹಾಕಬೇಕು ಎಂದು ಸಲಹೆ ಮಾಡಿರುವುದಾಗಿ ತಿಳಿದು ಬಂದಿದೆ.
ಅತ್ಯಂತ ಖಚಿತವಾಗಿ ಯಡಿಯೂರಪ್ಪ ತಮ್ಮ ಅಭಿಪ್ರಾಯ ಮಂಡಿಸಿ ಇದೇ ರೀತಿಯಲ್ಲಿ ಸಂಘಟನಾತ್ಮಕ ನಿರ್ಧಾರ ಕೈಗೊಳ್ಳಲು ಹೇಳಿದ ಪರಿಣಾಮ ನಿರ್ಧಾರ ಕೈಗೊಳ್ಳಲು ಅಸಾಧ್ಯವಾದ ಹೈಕಮಾಂಡ್ ತನ್ನ ನಿರ್ಧಾರ ಮುಂದೂಡಿದೆ.
ಯಾವುದೇ ತೀರ್ಮಾನವಾಗಲಿ,ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕೆಂಬ ಒತ್ತಡದಲ್ಲಿರುವ ಹೈಕಮಾಂಡ್ ಈ ಬಗ್ಗೆ ಅಭಿಪ್ರಾಯ ಆಲಿಸಲು ವೀಕ್ಷಕರನ್ನು ಕಳುಹಿಸಿದೆ.