ಬೆಂಗಳೂರು, ಜು.2- ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಹೊಸದಾಗಿ ವೈಎಸ್ ಟಿ ತೆರಿಗೆ ಆರಂಭವಾಗಿದೆ ಎಂದು ಮಾಜಿ ಮುಖ್ಯಮಂತ್ರಿಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು.
ವೈಎಸ್ ಟಿ ಎಂದರೆ ಏನು? ಸ್ವಲ್ಪ ಬಿಡಿಸಿ ಹೇಳಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಧ್ಯರಾತ್ರಿವರೆಗೂ ತಮ್ಮ ಮನೆಗಳಲ್ಲಿ ಅಧಿಕಾರಿಗಳ ಸಭೆ ಮಾಡುವ ಘನಂದಾರಿ ವ್ಯಕ್ತಿಗಳನ್ನು ಕೇಳಿ, ಈಗಾಗಲೇ ವರ್ಗಾವಣೆ ದಂಧೆಗಾಗಿ ಯಾರನ್ನೆಲ್ಲ ಫೀಲ್ಡಿಗೆ ಇಳಿಸಿ ಗುಪ್ತ ಸಭೆಗಳನ್ನು ಮಾಡುತ್ತಿದ್ದಾರೋ ಅವರನ್ನೇ ಕೇಳಿ, ನೀವೂ ಪತ್ತೆ ಹಚ್ಚಿ ಎಂದರು.
ನಾನು ನಿಮ್ಮ ಪಕ್ಷದ ಜತೆ ಸರಕಾರ ರಚನೆ ಮಾಡಿದ್ದಾಗ ನೀವೆಲ್ಲ ಏನೇನು ಮಾಡಿದಿರಿ ಎನ್ನುವುದು ಗೊತ್ತಿದೆ, ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು ಪೊಗರುದಸ್ತಾದ ಇಲಾಖೆಗಳನ್ನು ಇಟ್ಟುಕೊಂಡಿದ್ದ ನಿಮ್ಮ ಮಂತ್ರಿಗಳು ಏನು ಮಾಡಿದರು? ಮುಖ್ಯಮಂತ್ರಿಯಾಗಿ ನಾನು ಯಾವೊಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆಯೇ ಇರಲಿಲ್ಲ. ಎಲ್ಲ ದಂಧೆಗಳು ಯಾರ ಮೂಗಿನಡಿ ನಡೆಯುತ್ತಿದ್ದವು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಸೂಲಿ ಮಾಡಿ ವರ್ಗಾವಣೆ ಮಾಡುವ ದಂಧೆ ಶುರುವಾಗಿದೆ. ಅಧಿಕಾರಿಗಳನ್ನು ಮನೆಯಲ್ಲಿ ಕೂರಿಸಿಕೊಂಡು ರಾತ್ರಿ ಒಂದು ಗಂಟೆಯವರೆಗೆ ಸಭೆ ಮಾಡುತ್ತಾ ಇದ್ದಾರಲ್ಲಾ ಏಕೆ ಎಂದು ಕೇಳಿದ ಅವರು ಸರಕಾರಿ ಕಚೇರಿಗಳಲ್ಲಿ ಏಕೆ ಸಭೆಗಳನ್ನು ನಡೆಸುವುದಿಲ್ಲ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರದಲ್ಲಿ ಈಗಾಗಲೇ ಆಡಳಿತ ಹಳಿತಪ್ಪಿದೆ. ಒಂದು ಸರಕಾರ, ಹತ್ತಾರು ಮುಖ್ಯಮಂತ್ರಿಗಳು ಎನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಸಿದ್ದರಾಮಯ್ಯ ಅವರು ಒಬ್ಬರೇ ಮುಖ್ಯಮಂತ್ರಿ ಅಲ್ಲ. ಇಲಾಖೆಗೊಬ್ಬ ಮುಖ್ಯಮಂತ್ರಿ ಇದ್ದಾರೆ. ಒಬ್ಬೊಬ್ಬರು ಮುಖ್ಯಮಂತ್ರಿಯಂತೆ ಹೇಳಿಕೆ ನೀಡುತ್ತಾರೆ ಎಂದು ಅವರು ಲೇವಡಿ ಮಾಡಿದರು
Previous Articleಪ್ರತಾಪ್ ಸಿಂಹ ವಿರುದ್ಧ ಪೋಸ್ಟ್-ಪೊಲೀಸಪ್ಪನಿಗೆ ಸಂಚಕಾರ
Next Article ಸಾಲ ತೀರಿಸೋಕೆ ಎಳನೀರು ಕದ್ದ!