ನವದೆಹಲಿ, ಸೆ.4-ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೊಲೀಸರು ಸೊನಾಲಿ ಅವರ ಎಲ್ಲ ಲಾಕರ್ಗಳು ಮತ್ತು ಆಕೆಯ ಕೋಣೆಯಲ್ಲಿ ಪತ್ತೆಯಾದ ಮೂರು ಡೈರಿಗಳನ್ನು ವಶಕ್ಕೆ ಪಡೆದುಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಹರಿಯಾಣದ ಹಿಸಾರ್ ಜಿಲ್ಲೆಯ ಸ್ಯಾಂಟ್ ನಗರದಲ್ಲಿರುವ ಸೊನಾಲಿ ನಿವಾಸಕ್ಕೆ ನಿನ್ನೆ ಗೋವಾ ಪೊಲೀಸರು ಭೇಟಿ ನೀಡಿದರು. ಸೊನಾಲಿ ಅವರ ಬೆಡ್ರೂಮ್, ವಾರ್ಡ್ರೋಬ್ ಮತ್ತು ಪಾಸ್ವರ್ಡ್ ಸಂರಕ್ಷಿತ ಲಾಕರ್‌ಗಳನ್ನು ಗೋವಾ ಪೊಲೀಸ್ ತನಿಖಾ ತಂಡ ಪರಿಶೀಲನೆ ನಡೆಸಿತು.
ಮೇಲ್ನೋಟಕ್ಕೆ ಆಸ್ತಿ ವಹಿವಾಟು ಮತ್ತು ಇತರ ವಿವರಗಳನ್ನು ಸೋನಾಲಿ ಅವರು ತಮ್ಮ ಡೈರಿಗಳಲ್ಲಿ ಬರೆದಿದ್ದಾರೆ ಎಂದು ಹೇಳಲಾಗಿದೆ.
ಗೋವಾ ಪೊಲೀಸ್ ಇನ್ಸ್‌ಪೆಕ್ಟರ್ ಥೆರಾನ್ ಡಿಕೋಸ್ಟಾ ಅವರು ತಮ್ಮ ತಂಡದೊಂದಿಗೆ ತನಿಖೆಗಾಗಿ ಕೆಲವು ದಿನಗಳ ಹಿಂದೆ ಹಿಸಾರ್‌ಗೆ ತಲುಪಿದರು. ಸೊನಾಲಿ ಅವರಿಗೆ ಸಂಬಂಧಿಸಿದ ಲಾಕರ್‌ಗಳನ್ನು ವಶಪಡಿಸಿಕೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೋಸ್ಟಾ, ನಾವು ಇನ್ನೂ ಪ್ರಕರಣವನ್ನು ತನಿಖೆ ಮಾಡುತ್ತಿದ್ದೇವೆ ಮತ್ತು ಪರಿಶೀಲಿಸುತ್ತಿದ್ದೇವೆ. ನಾವು ತನಿಖೆಯನ್ನು ಪೂರ್ಣಗೊಳಿಸಿದ ನಂತರ ಮಾತ್ರ ತೀರ್ಮಾನವನ್ನು ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ತನಿಖೆಯ ನಂತರ ಸೋನಾಲಿಯ ಸಹೋದರ ವತನ್ ಢಾಕಾ ಮಾತನಾಡಿ, ನಮ್ಮ ಸ್ಯಾಂಟ್ ನಗರ ಅಪಾರ್ಟ್ಮೆಂಟ್ ಅನ್ನು ಪರಿಶೀಲಿಸುವುದಾಗಿ ಗೋವಾ ಪೊಲೀಸರಿಂದ ನನಗೆ ಕರೆ ಬಂದಿತು. ಶುಕ್ರವಾರ ಸುಮಾರು ಮೂರು ಗಂಟೆಗಳ ಕಾಲ ಪರಿಶೀಲನೆ ನಡೆಸಿದರು ಮತ್ತು ತಮ್ಮೊಂದಿಗೆ ಮೂರು ಡೈರಿಗಳನ್ನು ತೆಗೆದುಕೊಂಡು ಹೋಗಿದರು ಎಂದು ಹೇಳಿದರು.
ಡಿಜಿಟಲ್ ಲಾಕರ್ ತೆರೆಯಲು ವಿಫಲವಾದ ನಂತರ, ಅದನ್ನು ಪೊಲೀಸರು ವಶಪಡಿಸಿಕೊಂಡರು ಎಂದು ಮೃತ ಬಿಜೆಪಿ ನಾಯಕನ ಸೋದರ ಮಾವ ಅಮನ್ ಪುನಿಯಾ ಹೇಳಿದ್ದಾರೆ.
ಘಟನೆ ಹಿನ್ನೆಲೆ:
ಆರಂಭದಲ್ಲಿ ಸೊನಾಲಿ ಅವರು ಗೋವಾದ ಖಾಸಗಿ ಹೊಟೇಲ್ ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ನಂಬಲಾಗಿತ್ತು. ಅವರನ್ನು ಉತ್ತರ ಗೋವಾ ಜಿಲ್ಲೆಯ ಅಂಜುನಾ ಪ್ರದೇಶದಲ್ಲಿನ ಸೇಂಟ್ ಆಂಟೋನಿ ಆಸ್ಪತ್ರೆಗೆ (ಆ.23) ಕರೆತರುವಷ್ಟರಲ್ಲಿ ಮೃತಪಟ್ಟಿದ್ದರು. ಸಾಯುವ ಮುನ್ನ ತನ್ನ ತಾಯಿ, ಸಹೋದರ ಮತ್ತು ಸೋದರ ಮಾವನ ಜತೆ ಮಾತನಾಡಿದ್ದ ಸೋನಾಲಿ, ಸಾಕಷ್ಟು ಆತಂಕದಲ್ಲಿದ್ದರು. ತನ್ನ ಇಬ್ಬರು ಸಹಚರರ ವಿರುದ್ಧ ದೂರಿದ್ದರು ಎಂದು ಅವರ ಸಹೋದರ ರಿಂಕು ಆರೋಪಿಸಿದ್ದಾರೆ. ಅಲ್ಲದೆ, ಇದು ಹೃದಯಾಘಾತದ ಸಾವಲ್ಲ, ಅತ್ಯಾಚಾರ ಎಸಗಿ ಅವರ ಆಪ್ತರೇ ಕೊಲೆ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಎಂದು ಸೊನಾಲಿ ಕುಟುಂಬದ ಗೋವಾ ಪೊಲೀಸರಿಗೆ ಒತ್ತಾಯ ಮಾಡಿದ್ದರು.
ಆಘಾತಕಾರಿ ಅಂಶ:
ಪ್ರಕರಣ ಬೇರೆ ತಿರುವು ಪಡೆದುಕೊಳ್ಳುತ್ತಿದ್ದಂತೆ ಸೊನಾಲಿ ಅವರ ಮರಣೋತ್ತರ ವರದಿಯ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು. ಶವಪರೀಕ್ಷೆಯಲ್ಲಿ ಆಘಾತಕಾರಿ ಅಂಶವು ಸಹ ಬೆಳಕಿಗೆ ಬಂದಿತು. ಸೊನಾಲಿ ದೇಹದಲ್ಲಿ ಗಾಯಳಾಗಿರುವ ಬಗ್ಗೆ ಮರಣೋತ್ತರ ವರದಿಯಲ್ಲಿ ಉಲ್ಲೇಖವಾಯಿತು. ಅದರ ಬೆನ್ನಲ್ಲೇ ಅವರಿಬ್ಬರ ಆಪ್ತರಾದ ಸುಧೀರ್ ಸಾಂಗ್ವಾನ್ ಮತ್ತು ಆತನ ಸ್ನೇಹಿತ ಸುಖ್ವಿಂದರ್ ಸಿಂಗ್ರನ್ನು ಪೊಲೀಸರು ಬಂಧಿಸಿದರು. ಇದೀಗ ಆರೋಪಿಗಳು ಸಹ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಅಲ್ಲದೆ, ಈ ಪ್ರಕರಣದಲ್ಲಿ ಎಡ್ವಿನ್ ನನ್ಸ್ ಮತ್ತು ದತ್ತಪ್ರಸಾದ್ ಗಾವಂಕರ್ ಎಂಬುವರ ಬಂಧನವು ಆಗಿದೆ. ಆರೋಪಿ ಎಡ್ವಿನ್, ಸಾವಿಗೂ ಮುನ್ನ ಸೊನಾಲಿ ಕೊನೆಯದಾಗಿ ಪಾರ್ಟಿ ಮಾಡಿದ ಕರ್ಲಿಸ್ ಹೋಟೆಲ್ ಮಾಲೀಕ. ಇನ್ನೊಬ್ಬ ಆರೋಪಿ ದತ್ತಪ್ರಸಾದ್, ಓರ್ವ ಡ್ರಗ್ ಮಾರಾಟಗಾರ. ಡ್ರಗ್ಸ್ ಪ್ರಕರಣದಲ್ಲಿ ಇಬ್ಬರನ್ನು ಅರೋಪಿಳನ್ನಾಗಿ ಉಲ್ಲೇಖಿಸಲಾಗಿದೆ.
ವಿಡಿಯೋ ರೆಕಾರ್ಡ್:
ಸೊನಾಲಿ ಅವರು ಆ.22 ಅಂಜುನಾ ಬೀಚ್ನಲ್ಲಿರುವ ರೆಸ್ಟೊರೆಂಟ್ ಕಂ ನೈಟ್ ಕ್ಲಬ್ನಲ್ಲಿದ್ದರು. ಅಲ್ಲಿ ಸೊನಾಲಿ ಅವರಿಗೆ ಸಂಗ್ವಾನ್ ಮತ್ತು ಸಿಂಗ್ ಸೇರಿಕೊಂಡು ನೀರಿನಲ್ಲಿ ಕೆಲ ಪದಾರ್ಥವನ್ನು ಬೆರೆಸಿ, ಬಲವಂತವಾಗಿ ಕುಡಿಸಿರುವುದಾಗಿ ಆರೋಪಿಗಳೇ ಒಪ್ಪಿಕೊಂಡಿದ್ದಾರೆ ಮತ್ತು ತಪ್ಪೊಪ್ಪಿಗೆಯನ್ನು ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Previous Articleಮಕ್ಕಳಿಗೆ ವಿಷವಿಟ್ಟು ತಾಯಿ ಸಾವಿಗೆ ಶರಣು
Next Article ಗಂಡನ ಕೊಂದು ಕಥೆ ಕಟ್ಟಿದ ಹೆಂಡತಿ