ಎರಡು ದಿನಗಳ ಹಿಂದಷ್ಟೇ ಭಾರತೀಯ ಚಿತ್ರರಂಗ “ಕಲಾ ತಪಸ್ವಿ”ಯನ್ನು ಕಳೆದುಕೊಂಡಿತ್ತು. ಇಂದು, ಅಂದರೆ ಫೆಬ್ರವರಿ 4, 2023 ರಂದು ಮತ್ತೊಬ್ಬ ಅಮೋಘ ಕಲಾವಿದೆ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ, ಇಂಪಿನ ಕಂಠದ ಗಾಯಕಿ “ವಾಣಿ ಜಯರಾಮ್” ಅವರನ್ನು ಕಳೆದುಕೊಂಡು ಬಡವಾಗಿದೆ.
ಚೆನ್ನೈನ ನುಂಗಂಬಕ್ಕಂ (Nungambakkam, Chennai) ನಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ಅವರು ವಾಸಿಸುತ್ತಿದ್ದರು. 2018 ರಲ್ಲಿ ಪತಿ ಜಯರಾಮ್ ಅವರನ್ನು ಕಳೆದುಕೊಂಡ ಮೇಲೆ ಅವರು ಒಂಟಿ ಜೀವನವನ್ನು ನಡೆಸುತ್ತಿದ್ದರು. ಶನಿವಾರದಂದು ಎಂದಿನಂತೆ ಮನೆಯ ಕೆಲಸದ ಸಹಾಯಕಿ ಮನೆಯ ಬಾಗಿಲನ್ನು ತಟ್ಟಿದ್ದಾರೆ. ಆದರೆ ಕೆಲ ಸಮಯದ ನಂತರವೂ ಯಾವುದೇ ಪ್ರತಿಕ್ರಿಯೆ ಬರದಿದ್ದ ಕಾರಣ ಅವರಿಗೆ ತಿಳಿದಿದ್ದ ವಾಣಿ ಜಯರಾಮ್ ಅವರ ಸಂಬಂಧಿಕರಿಗೆ ತಿಳಿಸಿದ್ದಾರೆ. ಪೊಲೀಸರಿಗೆ ತಿಳಿಸಿದ ಸಂಬಂಧಿಕರು ವಾಣಿಯವರ ಮನೆಗೆ ಧಾವಿಸಿದ್ದಾರೆ. ಸಂಬಂಧಿಕರ ಎದುರಿನಲ್ಲಿ ಬಾಗಿಲನ್ನು ಒಡೆದಾಗ, ವಾಣಿ ಜಯರಾಮ್ ನಿಧನ ಹೊಂದಿದ ವಿಷಯ ಗೊತ್ತಾಗಿದೆ. ಅವರಿಗೆ 77 ವರ್ಷಗಳಾಗಿತ್ತು.
ಅವರ ಬಾಲ್ಯ ಹೇಗಿತ್ತು?
ವಾಣಿ ಜಯರಾಮ್ ಅವರು 30 ನವೆಂಬರ್ 1945 ರಲ್ಲಿ, ತಮಿಳುನಾಡಿನ ವೆಲ್ಲೂರಿನಲ್ಲಿ (Vellore, TamilNadu) ಜನಿಸಿದರು. ಆರು ಹೆಣ್ಣುಮಕ್ಕಳು ಮತ್ತು ಮೂವರು ಗಂಡುಮಕ್ಕಳ ಕುಟುಂಬದಲ್ಲಿ ಐದನೇ ಮಗಳಾಗಿ ಜನಿಸಿದ ಇವರ ಮೊದಲ ಹೆಸರು ಕಲೈವಾಣಿ. 8 ನೇ ವಯಸ್ಸಿನಲ್ಲಿ, ಅವರು ಮದ್ರಾಸ್‌ನ ಆಲ್ ಇಂಡಿಯಾ ರೇಡಿಯೊದಲ್ಲಿ (All India Radio, Chennai) ತಮ್ಮ ಮೊದಲ ಸಾರ್ವಜನಿಕ ಪ್ರದರ್ಶನವನ್ನು ನೀಡಿದರು. ಮದ್ರಾಸ್ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ವಾಣಿಯವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮದ್ರಾಸ್‌ನಲ್ಲಿ (State Bank of India, Chennai) ಉದ್ಯೋಗಿಯಾಗಿದ್ದರು.
1969 ರಲ್ಲಿ ಜೈರಾಮ್ ಅವರೊಂದಿಗಿನ ವಿವಾಹದ ನಂತರ, ಅವರು ತಮ್ಮ ಕುಟುಂಬವನ್ನು ಸ್ಥಾಪಿಸಲು ಮುಂಬೈಗೆ ತೆರಳಿದರು. ಅವರ ಗಾಯನ ಕೌಶಲ್ಯವನ್ನು ತಿಳಿದ ಜೈರಾಮ್, ವಾಣಿಯವರನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆಯಲು ಮನವೊಲಿಸಿದರು. ಪಟಿಯಾಲಾ ಘರಾನಾದ ಉಸ್ತಾದ್ ಅಬ್ದುಲ್ ರೆಹಮಾನ್ ಖಾನ್ ಅವರ ಬಳಿ ಸಂಗೀತಾಭ್ಯಾಸಕ್ಕೆ ಸೇರಿಕೊಂಡರು. ಇಲ್ಲಿ ಪಡೆದ ಕಠಿಣ ಮತ್ತು ಉತ್ಕೃಷ್ಟ ತರಬೇತಿಯೇ ಅವರನ್ನು ಸಂಗೀತವನ್ನು ವೃತ್ತಿಯನ್ನಾಗಿ ಪರಿಗಣಿಸುವಂತೆ ಮಾಡಿತು.
ಎಂತಹುದೇ ಕಷ್ಟಕರವಾದ ಸಂಯೋಜನೆಯಾದರೂ ಸುಲಭವಾಗಿ ಹೊಂದಿಕೊಂಡು, ನಿರಾಯಾಸವಾಗಿ ಹಾಡಬಲ್ಲರೆಂಬ ಖ್ಯಾತಿ ಪಡೆದಿದ್ದರು ವಾಣಿ ಜಯರಾಮ್. 1970 ರ ದಶಕದಿಂದ 1990 ರ ದಶಕದ ಅಂತ್ಯದವರೆಗೆ ಭಾರತದಾದ್ಯಂತ ಹಲವಾರು ಸಂಯೋಜಕರ ಅಚ್ಚುಮೆಚ್ಚಿನ ಆಯ್ಕೆಯಾಗಿದ್ದರು. ಎಂಎಸ್ ಇಳಯರಾಜ (M S Ilaiyaraaja), ಆರ್‌ಡಿ ಬರ್ಮನ್ (RD Burman), ಕೆವಿ ಮಹದೇವನ್ (KV Mahadevan), ಒಪಿ ನಯ್ಯರ್ (O.P. Nayyar), ಮದನ್ ಮೋಹನ್ (Madan Mohan), ಎ ಆರ್ ರೆಹಮಾನ್ (A R Rehman) ಸೇರಿದಂತೆ ಇತರ ಪ್ರಸಿದ್ಧ ಸಂಗೀತ ನಿರ್ದೇಶಕರೊಡನೆ ಅವರು ಕೆಲಸ ಮಾಡಿದ್ದಾರೆ.
ಅವರು ಹಲವಾರು ಭಾರತೀಯ ಭಾಷೆಗಳಲ್ಲಿ (19 ಭಾಷೆಗಳು), ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ, ಮರಾಠಿ, ಒಡಿಯಾ, ಗುಜರಾತಿ, ಅಸ್ಸಾಮಿ, ತುಳು ಮತ್ತು ಬಂಗಾಳಿ ಭಾಷೆಗಳಲ್ಲಿ ಹಾಡಿದ್ದಾರೆ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ಅನಂತ್ ನಾಗ್ ಸೇರಿದಂತೆ ಹೆಸರಾಂತ ಕಲಾವಿದರ ಚಿತ್ರಕ್ಕೆ ಹಾಡಿದ ಹೆಗ್ಗಳಿಕೆ ಇವರದ್ದು.
ಅವರು ಗಳಿಸಿದ ಹಲವು ಪ್ರಶಸ್ತಿಗಳಲ್ಲಿ ಕೆಲವು –
- ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮೂರು ಬಾರಿ ಗೆದ್ದಿದ್ದಾರೆ.
- ಒಡಿಶಾ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳಿಂದ ರಾಜ್ಯ ಸರ್ಕಾರದ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
- 2012 ರಲ್ಲಿ, ಅವರು ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿಯೊಂದಿಗೆ ಗೌರವಿಸಲ್ಪಟ್ಟರು.
- 2021 ರಲ್ಲಿ ವೃತ್ತಿಪರ ಗಾಯಕಿಯಾಗಿ ತಮ್ಮ ಸುವರ್ಣ ಮಹೋತ್ಸವವನ್ನು ಪೂರ್ಣಗೊಳಿಸಿದ ವಾಣಿ ಜಯರಾಮ್ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಅವರು ಹಾಡಿದ 10,000 ಸಾವಿರ ಹಾಡುಗಳಲ್ಲಿ ಕೆಲವು ಕನ್ನಡದ ಹಾಡುಗಳನ್ನು ನೆನೆಯುವುದಾದರೆ –
ಎಂದೆಂದೂ ನಿನ್ನನು ಮರೆತು – ಎರಡು ಕನಸು
ರಂಗೇನ ಹಳ್ಳಿಯಾಗೆ – ಬಿಳಿ ಹೆಂಡತಿ
ಸುತ್ತ ಮುತ್ತ ಯಾರೂ ಇಲ್ಲ – ಕಳ್ಳ ಕುಳ್ಳ
ಶುಭ ಮಂಗಳ ಸುಮೂಹರ್ತವೆ – ಶುಭಮಂಗಳ
ಬೆಳ್ಳಿ ಮೋಡವೇ ಎಲ್ಲಿ ಓದುವೆ – ವಸಂತ ಲಕ್ಷ್ಮಿ
ಕನಸಲೂ ನೀನೇ ಮನಸಲೂ ನೀನೇ – ಬಯಲು ದಾರಿ
ಬೆಸುಗೆ – ಬೆಸುಗೆ
ಏನೇನೋ ಆಸೆ – ಶಂಕರ ಗುರು
ತೆರೆದಿದೆ ಮನೆ – ಹೊಸ ಬೆಳಕು
ಮಾನಸ ಸರೋವರ – ಮಾನಸ ಸರೋವರ
ಲಾಲಿ ಲಾಲಿ ಸುಕುಮಾರ – ಭಕ್ತ ಪ್ರಹ್ಲಾದ
ಕಣ್ಣು ಕಣ್ಣು ಕಲೆತಾಗ – ಕಾಮನಬಿಲ್ಲು
ಏನು ಮಾಯವೋ ಏನು ಮರ್ಮವೋ – ಭಾಗ್ಯದ ಲಕ್ಷ್ಮಿ ಬಾರಮ್ಮ
ರಾಗಕೆ ಸ್ವರವಾಗಿ – ಹೃದಯ ಪಲ್ಲವಿ
ಏನ್ ಹುಡ್ಗಿರೋ ಅದ್ಯಾಕಿಂಗ್ ಆಡ್ತಿರೋ – ರಣಧೀರ
(ಚಿತ್ರಗಳ ಕೃಪೆ – ಅಂತರ್ಜಾಲ)