ಬೆಂಗಳೂರು,ಮಾ.19- ವೇತನ ಹೆಚ್ಚಳ,ಸೇವೆ ಖಾಯಂ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರಾಷ್ಟ್ರೀಯ ಆರೋಗ್ಯ ಮಿಷನ್ ನೌಕರರ ವಿರುದ್ಧ ರಾಜ್ಯ ಸರ್ಕಾರ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ(ಎಸ್ಮಾ) ಜಾರಿ ಮಾಡಿದೆ.
ಮುಷ್ಕರ ನಿರತರುವ48 ಗಂಟೆಯೊಳಗೆ ಪ್ರತಿಭಟನೆಯನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.
ಆದರೆ ಸರ್ಕಾರದ ಸೂಚನೆಗೆ ಪ್ರತಿಭಟನಾ ನಿರತರು ಜಗ್ಗದ ಹಿನ್ನಲೆಯಲ್ಲಿ ಪ್ರತಿಭಟನಾನಿರತ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ವಿರುದ್ಧ ಎಸ್ಮಾ ಜಾರಿಗೊಳಿಸಿದೆ.
ಸರ್ಕಾರದ ಮನವಿ,ಸಂಧಾನ ಮಾತುಕತೆ ಲೆಕ್ಕಿಸದೆ
ಸಿಬ್ಬಂದಿ ಒಂದು ತಿಂಗಳನಿಂದ ಪ್ರತಿಭಟನೆ ಮುಂದುವರೆಸಿರುವುದು ಸಾರ್ವಜನಿಕರಿಗೆ ಸಮಸ್ಯೆ ಉಂಟುಮಾಡಿದೆ. ಮಾರ್ಚ್ 16ರಂದು ನೀಡಿದ ಎಚ್ಚರಿಕೆಯನ್ನು ಮೀರಿ ಪ್ರತಿಭಟನೆಯನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ನೌಕರರ ಪ್ರಮುಖ ಬೇಡಿಕೆಯಾದ ಸಂಬಳವನ್ನು ಏರಿಸಲಾಗಿದ್ದು, ಮಾರ್ಚ್ 4ರಂದು ಶೇ.15 ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಉಳಿದ ಬೇಡಿಕೆಗಳ ಈಡೇರಿಕೆ ಸಂಬಂಧ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಆಶ್ವಾಸನೆ ನೀಡಿದ್ದಾರೆ ಆದರೂ ಮುಷ್ಕರ ಮುಂದುವರೆಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮವು 2005ರಿಂದ ಜಾರಿಯಲ್ಲಿದ್ದು ಇದು ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯಕ್ರವಾಗಿದೆ.ಮಣಿಪುರ ರಾಜ್ಯವನ್ನು ಹೊರತುಪಡಿಸಿ, ಒಡಿಸ್ಸಾ, ಪಂಜಾಬ್, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ರಾಜಸ್ಥಾನ ಇತರೆ ರಾಜ್ಯಗಳಲ್ಲಿ ಎನ್‍ಹೆಚ್‍ಎಂ ಒಳಗುತ್ತಿಗೆ ನೌಕರರನ್ನ ಖಾಯಂಗೊಳಿಸಲಾಗಿದೆ. ಹೀಗಾಗಿ ಕರ್ನಾಟಕದಲ್ಲೂ ನಮ್ಮನ್ನು ಖಾಯಂಗೊಳಿಸಬೇಕೆಂದು ಆಗ್ರಹಿಸಿ ನೌಕರರು ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.