ಬೆಂಗಳೂರು, ಅ20 – ರಾಜಕೀಯ ಉದ್ದೇಶಕ್ಕಾಗಿ ಈ ಹಿಂದಿನ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ನನ್ನ ವಿರುದ್ಧದ ಅಕ್ರಮ ಆಸ್ತಿಗಳಿಕೆ ಆರೋಪದ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿತು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಆಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಶಾಸಕರ ವಿರುದ್ಧವೂ ಇಂತಹುದೇ ಆರೋಪದ ಬೇಕಾದಷ್ಟು ಪ್ರಕರಣಗಳಿವೆ.ಆದರೆ ಈ ಯಾವುದನ್ನೂ ಸಿಬಿಐ ತನಿಖೆಗೆ ನೀಡದೆ ನನ್ನ ವಿರುದ್ಧದ ಆರೋಪದ ಪ್ರಕರಣ ಮಾತ್ರ ನೀಡಿದರು” ಎಂದು ದೂರಿದರು.
ಇಂತಹ ಆರೋಪದ ಪ್ರಕರಣವನ್ನು ಸಿಬಿಐ ತನಿಖೆಗೆ ಅನುಮತಿ ನೀಡಲು ಬರುವುದಿಲ್ಲ ಎಂದು
ಅಡ್ವೋಕೇಟ್ ಜನರಲ್ ಅವರೇ ಸ್ಪಷ್ಟವಾಗಿ ಹೇಳಿದ್ದರು. ಆದರೆ ಈ ವಿಚಾರವನ್ನು ಸ್ಪೀಕರ್ ಬಳಿಯೂ ತೆಗೆದುಕೊಂಡು ಹೋಗದೆ ಯಡಿಯೂರಪ್ಪ ಅವರು ಸೀದಾ ಸಿಬಿಐ ತನಿಖೆಗೆ ಅನುಮತಿ ನೀಡಿದರು ಎಂದು ವಿವರಿಸಿದರು.
ಈ ಆರೋಪದ ಪ್ರಕರಣ ಕುರಿತಂತೆ ಶೇ 90 ರಷ್ಟು ತನಿಖೆ ಮುಗಿದಿದೆ ಎಂದು ಸಿಬಿಐನವರೇ ಹೇಳಿದ್ದಾರೆ. ಆದರೆ ನನ್ನ ಬಳಿ ಯಾವ ವಿಚಾರಣಾಧಿಕಾರಿಯೂ ಬಂದಿಲ್ಲ. ವಿವರವನ್ನೂ ಪಡೆದಿಲ್ಲ. ನೋಡೋಣ ಏನು ಮಾಡುತ್ತಾರೋ. ನಾನು ನನ್ನ ವಕೀಲರ ಬಳಿ ಚರ್ಚೆ ಮಾಡುತ್ತೇನೆ” ಎಂದರು.
ಈ ವಿಷಯವಾಗಿ ಹಾದಿ- ಬೀದಿಯಲ್ಲಿ ಹೋಗುವವರಿಗೆಲ್ಲಾ ಉತ್ತರ ಕೊಡಲು ಆಗುವುದಿಲ್ಲ. ನ್ಯಾಯಾಲಯ ಏನು ಹೇಳುತ್ತದೆಯೋ ಅದಕ್ಕೆ ಗೌರವ ಕೊಡಬೇಕು ಎಂದು ಹೇಳಿದರು