ಬೆಂಗಳೂರು, ಆ.20 – ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಇತರೆ ಪಕ್ಷಗಳ ಪ್ರಭಾವಿ ಮುಖಂಡರನ್ನು ತನ್ನತ್ತ ಸೆಳೆಯುತ್ತಿದೆ.ಇದರ ಭಾಗವಾಗಿ ವಿಧಾನಪರಿಷತ್‍ನ ಮಾಜಿ ಸದಸ್ಯ ಆಯನೂರು ಮಂಜುನಾಥ್ (Ayanur Manjunath) ಕಾಂಗ್ರೆಸ್ ಸೇರ್ಪಡೆಯಾಗಲು ಉತ್ಸುಕರಾಗಿದ್ದಾರೆ.
ಬಿಜೆಪಿಯಿಂದ ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದ ಆಯನೂರು ಮಂಜುನಾಥ್ ಹಿಂದೊಮ್ಮೆ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ ನಿಂದ ಲೋಕಸಭಾ ಚುನಾವಣೆ ಸ್ಪರ್ಧಿಸಿದ್ದ ಅವರು ನಂತರ ಕಾಂಗ್ರೆಸ್ ತೊರೆದಿದ್ದರು ಇದೀಗ ಮತ್ತೆ ಕಾಂಗ್ರೆಸ್ ನತ್ತ ಮುಖ ಮಾಡಿದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು ಸದ್ಯದಲ್ಲೇ ನಡೆಯಲಿರುವ ನೈರುತ್ಯ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಇಚ್ಚೆ ಹೊಂದಿದ್ದಾರೆ.
ಈ ಮೊದಲು ಇದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಆಯ್ಕೆಯಾಗಿ ವಿಧಾನಪರಿಷತ್ ಸದಸ್ಯರಾಗಿ ಕೆಲಸ ಮಾಡುತ್ತಿದ್ದರು. ಅವರ ಅಧಿಕಾರಾವ 2024 ರ ಜೂನ್ 21 ರವರೆಗೂ ಇತ್ತು. ಆದರೆ ವಿಧಾನಸಭೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದ ಅವರು, ಮೇಲ್ಮನೆಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಅಂದೇ ಕಾಂಗ್ರೆಸ್ ಸೇರಲು ಪ್ರಯತ್ನ ನಡೆಸಿದ್ದರಾದರೂ, ಸಮಯದ ಅಭಾವದಿಂದ ಸಾಧ್ಯವಾಗದೆ ಜೆಡಿ ಎಸ್ ಸೇರಿ ವಿಧಾನಸಭೆಗೆ ಸ್ಪರ್ಧಿಸಿ ಸೋತರು.
ಅಂದಿನಿಂದ ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿರುವ ಆಯನೂರು ಮಂಜುನಾಥ್ ಇದೀಗ ಈ ಕುರಿತಂತೆ ಪ್ರಯತ್ನ ಚುರುಕುಗೊಳಿಸಿದ್ದಾರೆ.ಈಗ ಮತ್ತೊಮ್ಮೆ ನೈರುತ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಆಯನೂರು ಮಂಜುನಾಥ್ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.
ಶಿವಮೊಗ್ಗ ವ್ಯಾಪ್ತಿಯನ್ನೊಳಗೊಂಡ ಈ ಕ್ಷೇತ್ರದಲ್ಲಿ ಕಳೆದ 7 ಚುನಾವಣೆಯಿಂದಲೂ ಕಾಂಗ್ರೆಸ್ ಸೋಲು ಕಾಣುತ್ತಿದೆ. ಈ ಬಾರಿ ಶತಾಯಗತಾಯ ಗೆಲ್ಲಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಆಯನೂರು ಮಂಜುನಾಥ್ ಅವರನ್ನು ಕಾಂಗ್ರೆಸ್‍ನತ್ತ ಸೆಳೆದಿದೆ.