ನವದೆಹಲಿ,ಫೆ.28-ಪಾಕಿಸ್ತಾನ, ಚೀನಾ ಹಾಗೂ ಹಾಂಕಾಂಗ್‌ನಲ್ಲಿ ತರಬೇತಿ ಪಡೆದ `ಡೇಂಜರಸ್’ ವ್ಯಕ್ತಿಯೊಬ್ಬ ಮುಂಬೈ ಪ್ರವೇಶಿಸಿದ್ದು, ನಿಗಾ ವಹಿಸುವಂತೆ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಮುಂಬೈ ಪೊಲೀಸರಿಗೆ ಇ-ಮೇಲ್ ಸಂದೇಶ ರವಾನಿಸಿದೆ.
ಈ ಡೇಂಜರಸ್ ವ್ಯಕ್ತಿ ಇಂದೋರ್ ಮೂಲದ ಸರ್ಫರಾಜ್ ಮೆಮನ್ ಎಂದು ಎನ್‌ಐಎ ಗುರುತಿಸಿದೆ. ಈತ ಈಗಾಗಲೇ ಮುಂಬೈ ಪ್ರವೇಶ ಮಾಡಿದ್ದಾನೆ. ಉಗ್ರ ಕೃತ್ಯಗಳನ್ನೂ ಎಸಗುವ ಸಾಧ್ಯತೆಯಿದೆ ಎಂದು ಇ-ಮೇಲ್‌ನಲ್ಲಿ ತಿಳಿಸಿದೆ.
ಜೊತೆಗೆ ಆತನ ಆಧಾರ್ ಮಾಹಿತಿ, ವಾಹನ ಚಾಲನಾ ಪರವಾನಗಿ, ಪಾಸ್‌ಪೋರ್ಟ್ ಮೊದಲಾದ ದಾಖಲೆಗಳನ್ನು ಎನ್‌ಐಎ ಮುಂಬೈ ಪೊಲೀಸರೊಂದಿಗೆ ಹಂಚಿಕೊಂಡಿದೆ.
ಸಂದೇಶದ ಬೆನ್ನಲ್ಲೇ ನಗರದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದು, ಮಧ್ಯಪ್ರದೇಶದ ಇಂದೋರ್ ಪೊಲೀಸರಿಗೂ ಈ ಬಗೆಗಿನ ಮಾಹಿತಿ ರವಾನಿಸಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
1982 ರಲ್ಲಿ ಜನಿಸಿದ ಸರ್ಫರಾಜ್ ಮೆಮನ್ ಚೀನಾಕ್ಕೆ ಪ್ರಯಾಣಿಸಿದ್ದಾನೆ. ಆದರೆ ಪಾಕಿಸ್ತಾನಕ್ಕೆ ಹೋಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ. ಸದ್ಯ ಮುಂಬೈ ಪೊಲೀಸರು ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ
ಕಳೆದ ಫೆ.25 ರಂದು ಮಹಾರಾಷ್ಟ್ರ ಮೂಲದ ಖಾಲಿದ್ ಮುಬಾರಕ್ (21) ಮತ್ತು ತಮಿಳುನಾಡು ಮೂಲದ ಅಬ್ದುಲ್ಲಾ (26) ಎಂಬಿಬ್ಬರು ಶಸ್ತ್ರಾಸ್ತ್ರ ತರಬೇತಿ ಪಡೆಯಲು ಪಾಕಿಸ್ತಾನಕ್ಕೆ ತೆರಳಲು ಯತ್ನಿಸುತ್ತಿದ್ದ ವೇಳೆ ದೆಹಲಿ ಪೊಲೀಸರ ವಿಶೇಷ ಪಡೆ ಬಂಧಿಸಿತ್ತು. ಈ ಬೆನ್ನಲ್ಲೇ ಡೇಂಜರಸ್ ವ್ಯಕ್ತಿಯ ಸುಳಿವು ಆತಂಕ ಮೂಡಿಸಿದೆ.
ಕಳೆದ ಫೆ.25ರಂದು ದೆಹಲಿಯಲ್ಲಿ ಸಿಕ್ಕಿಬಿದ್ದ ಇಬ್ಬರೂ ವ್ಯಕ್ತಿಗಳು ಅಕ್ರಮವಾಗಿ ಗಡಿದಾಟುವ ಮೂಲಕ ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ಶಸ್ತ್ರಾಸ್ತ್ರ ಬಳಕೆ ತರಬೇತಿ ಪಡೆಯಲು ನಿರ್ಧರಿಸಿದ್ದರು. ಫೆಬ್ರವರಿ 14ರಂದೇ ಪಾಕ್ ಮೂಲದ ಹ್ಯಾಂಡ್ಲರ್ ಸಹಾಯದಿಂದ ಭಯೋತ್ಪಾದನಾ ಘಟಕದ ಬಗ್ಗೆ ನಿಷ್ಠೆ ಹೊಂದಿರುವ ಕೆಲ ಉಗ್ರಗಾಮಿಗಳು ಪಾಕ್‌ಗೆ ತೆರಳಲು ಸಂಚು ರೂಪಿಸಿದ್ದ ವೇಳೆ ಇಬ್ಬರೂ ಸಿಕ್ಕಿಬಿದ್ದಿದ್ದರು. ಈ ವೇಳೆ ಅವರಿಂದ 2 ಪಿಸ್ತೂಲ್, 10 ಸಜೀವ ಗುಂಡು, ಚಾಕು, ವೈರ್ ಕಟರ್ ವಶಪಡಿಸಿಕೊಳ್ಳಲಾಗಿತ್ತು.
Dangerous ವ್ಯಕ್ತಿ Mumbai ಪ್ರವೇಶ- ಕಟ್ಟೆಚ್ಚರಕ್ಕೆ ಸೂಚನೆ
Previous ArticleCyber crime City ಬೆಂಗಳೂರು
Next Article ಹಂದಿ ಹೊಡೆಯಲು ಹೋದವರು ವಾಪಸ್ ಬರಲೇ ಇಲ್ಲ