ಹೊಸಪೇಟೆ. ಸೆ,8- ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಜಿಲ್ಲೆ ವಿಜಯನಗರದಲ್ಲಿ ಇದೀಗ ರಾಜಕೀಯ ಜಂಗೀಕುಸ್ತಿ ಆರಂಭವಾಗಿದೆ ಅದೂ ವಿಜಯನಗರ ಕ್ಷೇತ್ರದಲ್ಲಿ ಮತ್ತೆ ಹಳೆ ಹುಲಿಗಳ ಕಾಳಗಕ್ಕೆ ವೇದಿಕೆ ಸಿದ್ಧವಾಗುತ್ತಿದೆ.
ಕಾಂಗ್ರೆಸ್ ನಿಂದ ವಿಧಾನಸಭೆಗೆ ಆಯ್ಕೆಯಾಗಿ ಬಿಜೆಪಿ ಸೇರಿ ಮಂತ್ರಿಯಾಗಿರುವ ಆನಂದ್ ಸಿಂಗ್ ವಿರುದ್ದ ಸೆಣಸಾಟಕ್ಕಿಳಿಯಲು ಮಾಜಿ ಶಾಸಕ ಎಚ್.ಆರ್. ಗವಿಯಪ್ಪ ಸಜ್ಜುಗೊಂಡಿದ್ದಾರೆ ಇದಕ್ಕಾಗಿ ಅವರು ಈಗಾಗಲೇ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಕೈಗೊಂಡು ಬೆಂಬಲಿಗರ ಅಭಿಪ್ರಾಯ ಕೇಳಿದ್ದಾರೆ. ಇದೀಗ ಎಲ್ಲರ ಸಲಹೆಯಂತೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲು ಸಿದ್ದರಾಗಿದ್ದಾರೆ.
ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆನಂದ ಸಿಂಗ್ ಬಿಜೆಪಿಯಿಂದ ಸ್ಪರ್ಧಿಸಿದ್ದ ಗವಿಯಪ್ಪ ಅವರನ್ನು ಸೋಲಿಸಿದ್ದರು. ಆಗ ಗವಿಯಪ್ಪ ಅವರು ಕಾಂಗ್ರೆಸ್ ತೊರೆದು ಬಿಜೆಪಿಯ ಚಿಹ್ನೆಯಡಿ ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡಿದ್ದರು. ಬಳಿಕ ಬದಲಾದ ಸನ್ನಿವೇಶದಲ್ಲಿ ಆನಂದ ಸಿಂಗ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ ಉಪ ಚುನಾವಣೆಯಲ್ಲಿ ಗೆದ್ದು ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾದರು.
ಈ ವೇಳೆ ನಡೆದ ಉಪಚುನಾವಣೆಯಲ್ಲಿ ಎಚ್.ಆರ್. ಗವಿಯಪ್ಪ ಅವರಿಗೆ ಆಗಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮುಂದಿನ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡುವ ಅಭಯ ನೀಡಿದ್ದರು.ಹೀಗಾಗಿ ಗವಿಯಪ್ಪ ಯಾವುದೇ ಅಧಿಕಾರ ಒಪ್ಪದೆ ಆನಂದ್ ಸಿಂಗ್ ಗೆಲುವಿಗೆ ಶ್ರಮಿಸಿದ್ದರು.
ಆದರೆ ಈಗ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಮತ್ತೆ ಆನಂದ ಸಿಂಗ್ ಅವರಿಗೆ ಟಿಕೆಟ್ ದೊರೆಯುವ ಲಕ್ಷಣ ಗೋಚರಿಸಿದೆ. ಹಾಗಾಗಿ ಗವಿಯಪ್ಪ ಅವರು ತಮ್ಮ ಬೆಂಬಲಿಗರ ಸಲಹೆಯಂತೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ.
Previous Articleರಿವಾಲ್ವಾರ್ ತೋರಿಸಿ ಪರಾರಿಯಾಗಿದ್ದ ಡ್ರಗ್ಸ್ ಪೆಡ್ಲರ್
Next Article ರಾಣಿ ಎಲಿಜಬೆತ್ ಆರೋಗ್ಯ ಸ್ಥಿತಿ ಗಂಭೀರ!