ನವದೆಹಲಿ
ಬಾಹ್ಯಾಕಾಶ ಚರಿತ್ರೆಯಲ್ಲಿ ಇಸ್ರೋ (ISRO) ದ ವಿಜ್ಞಾನಿಗಳು ಮತ್ತೊಂದು ಮೈಲಿಗಲ್ಲು ಮುಟ್ಟಿದ್ದಾರೆ. ಇಸ್ರೋ ತಂಡ ನೂತನವಾಗಿ ಅಭಿವೃದ್ಧಿಪಡಿಸಿರುವ ಎಸ್ಎಸ್ಎಲ್ವಿ ಡಿ2 ರಾಕೆಟ್ (SSLV D2 Rocket) ಮೂರು ಉಪಗ್ರಹಗಳನ್ನು ಹೊತ್ತು ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ.
ಕಳೆದ ಬಾರಿ ನಡೆಸಿದ ಇದರ ಉಡಾವಣಾ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಈ ಬಾರಿ ವಿಶೇಷ ಕಾಳಜಿಯೊಂದಿಗೆ ಹಗಲಿರುಳು ಶ್ರಮಿಸಿ ಯಶಸ್ವಿಗೊಳಿಸಿದ್ದಾರೆ. ಇಸ್ರೋ ವಿಜ್ಞಾನಿಗಳ ಸಾಧನೆಗೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಆಂಧ್ರಪ್ರದೇಶದ ಶ್ರೀಹರಿಕೋಟಾ (Sriharikota, Andhra Pradesh) ದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (Satish Dhawan Space Centre – SDSC) ದಿಂದ ಶುಕ್ರವಾರ ಬೆಳಗ್ಗೆ 9:18ಕ್ಕೆ ಉಡಾವಣೆ ಮಾಡಲಾಯಿತು.
EOS-07, JANUS-1 ಮತ್ತು AzadiSAT-2 ಎಂಬ ಮೂರು ಉಪಗ್ರಹಗಳನ್ನು ಹೊತ್ತು SSLV ನಭಕ್ಕೆ ಹಾರಿದೆ.
AzadiSAT-2 ಉಪಗ್ರಹವನ್ನು ದೇಶಾದ್ಯಂತ 75 ಶಾಲೆಗಳಿಂದ ಆಯ್ದ 750 ವಿದ್ಯಾರ್ಥಿನಿಯರು ಸೇರಿ ಅಭಿವೃದ್ಧಿಪಡಿಸಿದ್ದಾರೆ. ಉಡಾವಣೆ ಮಾಡುವಾಗ NCC ಹಾಡು ಮೊಳಗಿದ್ದು ವಿಶೇಷವಾಗಿತ್ತು. NCC ಯ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಈ ಹಾಡನ್ನು ನುಡಿಸಲಾಯಿತು.