ಬೆಂಗಳೂರು,ಜೂ.12- ನಗರದಲ್ಲಿ ಬಂಧನಕ್ಕೆ ಒಳಗಾಗಿದ್ದ ಉಗ್ರ ತಾಲಿಬ್ ಹುಸೇನ್ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನಗರ ಪೊಲೀಸರಿಗೆ ಕೊನೆಗೂ ಸಿಕ್ಕಿದೆ.
ಕಾಶ್ಮೀರ ಪೊಲೀಸರನ್ನು ಸಂಪರ್ಕಿಸಿದ್ದ ಗುಪ್ತಚರ ಇಲಾಖೆ ಪೊಲೀಸರು, ಎರಡೇ ದಿನದಲ್ಲಿ ತಾಲಿಬ್ ಹುಸೇನ್ ಕುರಿತ ವರದಿ ತಯಾರಿಸಿದ್ದಾರೆ.
ತಾಲಿಬ್ ಬಗ್ಗೆ ಸಿದ್ಧವಾಗಿರುವ ವರದಿಯನ್ನು ಸದ್ಯ ಪೊಲಿಸರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿಗೆ ಸಲ್ಲಿಸಿದ್ದಾರೆ. ಹುಸೇನ್ ಬಗ್ಗೆ ನೀಡಿದ ಮಾಹಿತಿಯಲ್ಲಿ ಆತನ ವಿರುದ್ಧ ಎರಡು ಕೇಸ್ಗಳು ದಾಖಲಾಗಿರುವ ಬಗ್ಗೆ ಮಾಹಿತಿಯಿದ್ದು, 2007-08ರಲ್ಲಿ ನಡೆದ ಕೆಲವು ಅಪರಾಧ ಕೃತ್ಯಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಮ್ಮು-ಕಾಶ್ಮೀರದ ಕಿಸ್ತಾವರ್ ಠಾಣೆಯಲ್ಲಿ ಯುಎಪಿಎ ಕಾಯ್ದೆ ಮತ್ತು ಸ್ಫೋಟಕ ಕಾಯ್ದೆಯಡಿ ಕೇಸ್ ದಾಖಲಾಗಿವೆ. ಹೀಗಾಗಿ ಉಗ್ರನ ಇಂಚಿಂಚು ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ.
ನಗರದಲ್ಲಿ ಉಗ್ರ ತಾಲಿಬ್ ಹುಸೇನ್ ಬಂಧನವಾಗಿರುವ ಹಿನ್ನೆಲೆ ನಗರದ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ನಿಗಾವಹಿಸಲು ಎಟಿಸಿಗೆ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಸೂಚನೆ ನೀಡಿದ್ದಾರೆ.
ಬಜರಂಗದಳ ದೂರು:
ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ದೂರು ನೀಡಿದೆ. ತಾಲೀಬ್ ಹುಸೇನ್ ನೆಲೆಸಿದ್ದ ಮಸೀದಿಯನ್ನು ಸೀಜ್ ಮಾಡಬೇಕು, ಸಿಮ್ ಕಾರ್ಡ್ ನೀಡಿದವರಿಗೆ ಹಾಗೂ ಆತನಿಗೆ ಆಶ್ರಯ ಕಲ್ಪಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ವಿಎಚ್ಪಿ ಮುಖಂಡರಾದ ತೇಜಸ್ ಗೌಡ, ಗೋವರ್ಧನ್ ಹಾಗೂ ಶಿವಕುಮಾರ್ ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ನಗರದಲ್ಲಿ ನಡೆದ ಸಭೆಯಲ್ಲಿ ಏನೇನು ಭಯೋತ್ಪಾದಕ ಚಟುವಟಿಕೆಗಳು ನಡೆದಿದೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಬೇಕು. ಹಿಂದೂಗಳ ಹಬ್ಬದಲ್ಲಿ ಅನುಮತಿ ಪಡೆಯಲು ಸಾಕಷ್ಟು ಒದ್ದಾಡಬೇಕು. ಆದರೆ ಮುಸ್ಲಿಮರ ಹಬ್ಬಗಳಲ್ಲಿ ಯಾವುದೇ ಅನುಮತಿ ಪಡೆಯದೆ ಆಚರಣೆ ಮಾಡಲಾಗುತ್ತಿದೆ. ರಂಜಾನ್ ಹಬ್ಬದಂದು ನಿಯಮ ಉಲ್ಲಂಘನೆ ಬಗ್ಗೆಯೂ ಸೂಕ್ತ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.