ಬೆಂಗಳೂರು,ಜೂ.14-ನಗರದಲ್ಲಿ ಬೈಕ್ ವೀಲ್ಹಿಂಗ್, ಸ್ಟಂಟ್ ಮಾಡಿ ಪ್ರಕರಣ ದಾಖಲಿಸಿಕೊಳ್ಳುವವರ ಪೈಕಿ ಅಪ್ರಾಪ್ತರೇ ಹೆಚ್ಚಾಗಿರುವುದು ಆತಂಕಕಾರಿ ಸಂಗತಿಯಾಗಿದೆ. ಕಳೆದ ಜ.1 ರಿಂದ ಮೇ 31ರ ನಡುವೆ ಬೈಕ್ ಸ್ಟಂಟ್ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದವರ ಪೈಕಿ ಶೇ.20 ರಷ್ಟು ಸವಾರರು ಅಪ್ರಾಪ್ತರಾಗಿದ್ದಾರೆ.
2020ರಲ್ಲಿ ಶೇ.9ರಷ್ಟು , 2021ರಲ್ಲಿ ಶೇ.13ರಷ್ಟು ಅಪ್ರಾಪ್ತರು ಬೈಕ್‌ಸ್ಟಂಟ್ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು ಅವರೆಲ್ಲರಿಗೂ ಪಾಲಕರೇ ಬೈಕ್ ಕೊಡಿಸಿದ್ದರೆ, ಇನ್ನು ಕೆಲವರು ಸಂಬಂಧಿಕರಿಂದ ಹಾಗು ಸ್ನೇಹಿತರಿಂದ ಬೈಕ್‌ಗಳನ್ನು ಪಡೆದಿದ್ದಾರೆ.
ಪಾಲಕರಿಗೆ ದಂಡ:
ಬನ್ನೇರುಘಟ್ಟ ರಸ್ತೆಯಲ್ಲಿ ತನ್ನ ತಂದೆಯ ಗೇರ್‌ಲೆಸ್ ಸ್ಕೂಟರ್‌ನಲ್ಲಿ ವೀಲಿಂಗ್ ಮಾಡಿದ್ದ 16 ವರ್ಷದ ಬಾಲಕನ ವಿರುದ್ಧ ಇತ್ತೀಚೆಗೆ ಹುಳಿಮಾವು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಳಿಕ ತಂದೆಯನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದಾಗ ತನ್ನ ಮಗ ಇಂತಹ ಕೃತ್ಯ ಮಾಡಲು ಸಾಧ್ಯವೇ ಇಲ್ಲ ಎಂದು ವಾದಿಸಿದ್ದರು. ಆದಾಗ್ಯೂ ಸಾಕ್ಷಿ ಆಧರಿಸಿ ಪೊಲೀಸರು ಮೋಟಾರು ವಾಹನ ಕಾಯಿದೆ 180ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಬಳಿಕ ನ್ಯಾಯಾಲಯವು ಬಾಲಕನಿಗೆ ಸ್ಕೂಟರ್ ನೀಡಿದ್ದಕ್ಕೆ ತಂದೆಗೆ 5 ಸಾವಿರ ರೂ.ಗಳ ದಂಡ ವಿಧಿಸಿ ಆದೇಶ ಹೊರಡಿಸಿತ್ತು. ಪೊಲೀಸರ ಪ್ರಕಾರ, ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯ 25 ಸಾವಿರದವರೆಗೂ ದಂಡ ವಿಧಿಸಬಹುದಾಗಿದೆ.
ಸೆಕ್ಷನ್ 180ರ ಅನ್ವಯ ನಿಯಮ ಉಲ್ಲಂಘನೆಗಾಗಿ ದಂಡ ಅಥವ ಮೂರು ತಿಂಗಳ ಜೈಲುಶಿಕ್ಷೆ ವಿಧಿಸಬಹುದಾಗಿದೆ. ಕೆಲ ಪ್ರಕರಣಗಳಲ್ಲಿ ದಂಡ ಮತ್ತು ಜೈಲು ಶಿಕ್ಷೆ ಎರಡನ್ನೂ ವಿಧಿಸಬಹುದಾಗಿದೆ
‘ಅಪ್ರಾಪ್ತರಿಗೆ ವಾಹನ ಚಲಾಯಿಸಲು ಕೊಟ್ಟವರು ಕ್ರಿಮಿನಲ್ ಪ್ರಕರಣ ಎದುರಿಸಬೇಕಾಗುತ್ತದೆ. ಜತೆಗೆ ಸಿಆರ್‌ಪಿಸಿ ಸೆಕ್ಷನ್ 107ರ ಅಡಿಯಲ್ಲಿ ಬಾಂಡ್‌ಗೆ ಸಹಿ ಹಾಕಬೇಕು. ಅಪರಾಧವನ್ನು ಪುನರಾವರ್ತಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕು. ಮತ್ತೊಮ್ಮೆ ಅಪರಾಧ ಪುನರಾವರ್ತನೆಯಾದಲ್ಲಿ ಭಾರಿ ದಂಡ ಮತ್ತು ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದು ಸಂಚಾರ ಪೊಲೀಸ್ ವಿಭಾಗದ ಜಂಟಿ ಆಯುಕ್ತ ಬಿ.ಆರ್ ರವಿಕಾಂತೇಗೌಡ ತಿಳಿಸಿದ್ದಾರೆ.
‘ಅಪ್ರಾಪ್ತರು ದ್ವಿಚಕ್ರ ವಾಹನ ಸವಾರಿ ಮಾಡುವ ಪ್ರವೃತ್ತಿ ಹೆಚ್ಚಿದೆ. ಅವರಿಗೆ ಈ ವಯಸ್ಸಿನಲ್ಲೇ ಮೋಜು ಮಾಡುವ ಹುಮ್ಮಸ್ಸು ಹೆಚ್ಚಿರುತ್ತದೆ. ಅನೇಕರು ಅತಿ ವೇಗದ ಚಾಲನೆ, ವೀಲಿಂಗ್, ತ್ರಿಬಲ್ ರೈಡಿಂಗ್ ಮತ್ತು ಇತರ ಸಾಹಸಗಳನ್ನು ಮಾಡಲು ಬಯಸುತ್ತಾರೆ. ಮಾಧ್ಯಮಗಳಲ್ಲಿ ತೋರಿಸುವ ಇಂತಹ ಸಾಹಸಗಳಿಂದ ಅವರು ಪ್ರಚೋದನೆಗೆ ಒಳಗಾಗುತ್ತಾರೆ’ ಎಂದು ಪಶ್ಚಿಮ ಸಂಚಾರ ವಿಭಾಗ ಡಿಸಿಪಿ ಕುಲದೀಪ್‌ಕುಮಾರ್ ಜೈನ್ ಹೇಳಿದರು.
ಮಕ್ಕಳ ಕೈಗೆ ಬೈಕ್ ಕೊಡದಿರಿ : ‘ಮಕ್ಕಳು ಶಾಲೆಗೆ ಹೋಗುವಾಗ ಹಾಗು ಹಿಂದಿರುಗುವಾಗ ಗೇರ್‌ಲೆಸ್ ಸ್ಕೂಟರ್‌ಗಳಲ್ಲಿ ಡಬಲ್ ರೈಡಿಂಗ್ ಮಾಡುವುದನ್ನು ನಾನು ಗಮನಿಸಿದ್ದೇನೆ. ವಿಪರ್ಯಾಸವೆಂದರೆ, ಕೆಲ ಪ್ರಕರಣಗಳಲ್ಲಿ ಪಾಲಕರೇ ಹಿಂಬದಿ ಸೀಟಿನಲ್ಲಿ ಕುಳಿತಿರುತ್ತಾರೆ’ ಎಂದು ಸಂಚಾರ ಪೋಲಿಸ್ ಇನ್ಸ್‌ಪೆಕ್ಟರೊಬ್ಬರು ಹೇಳಿದರು.
‘ಮಕ್ಕಳ ಕೈಗೆ ಸ್ಕೂಟರ್/ಬೈಕ್ ಕೊಡದಂತೆ ನಾವು ಪೋಷಕರಲ್ಲಿ ಮನವಿ ಮಾಡುತ್ತೇವೆ. 16 ವರ್ಷಕ್ಕೆ ಗೇರ್‌ಲೆಸ್ ಸ್ಕೂಟರ್‌ಗಳಿಗಾಗಿ ಕಲಿಕಾ ಪರವಾನಗಿಯನ್ನು ಪಡೆಯಬಹುದಾಗಿದೆ. ಅಲ್ಲಿಯವರೆಗೆ ಕಾಯಿರಿ ಎಂದು ಸಲಹೆ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.
Previous Articleಒಂದೂವರೆ ವರ್ಷದಲ್ಲಿ ಹತ್ತು ಲಕ್ಷ ನೇಮಕಾತಿ: ಪ್ರಧಾನಿ ಸೂಚನೆ
Next Article ಖತರ್ನಾಕ್ ಪತ್ನಿ..