ಬೆಂಗಳೂರು – ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ನಾಮಕರಣ, ಅಧಿಕಾರ ಹಂಚಿಕೆ ಮತ್ತು ವರ್ಗಾವಣೆ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕಪಕ್ಷೀಯ ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಹೈಕಮಾಂಡ್ ಗೆ ದೂರು ಸಲ್ಲಿಸಿದ್ದಾರೆ.
ದೆಹಲಿ ಪ್ರವಾಸದಲ್ಲಿರುವ ಹಲವು ಮುಖಂಡರು ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ವರ್ಗಾವಣೆ ವಿಷಯದಲ್ಲಿ ಸರ್ಕಾರದ ವಿರುದ್ಧ ಆರೋಪಗಳು ಕೇಳಿಬರುತ್ತಿವೆ. ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವರು ದಂಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವುದಾಗಿ ಮೂಲಗಳು ತಿಳಿಸಿವೆ.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಹಲವು ಇಲಾಖೆಗಳ ಕಾರ್ಯ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಮುಖ್ಯಮಂತ್ರಿಗಳ ಪುತ್ರ ಇವರಿಗೆ ಬೆಂಗಾವಲಾಗಿ ನಿಂತಿದ್ದಾರೆ ಕೆಲವು ಅಧಿಕಾರಿಗಳು ಶಾಸಕ ಸಚಿವರ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಿಲ್ಲ ಮುಖ್ಯಮಂತ್ರಿಗಳಿಗೆ ದೂರು ನೀಡಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ ಈ ಬಗ್ಗೆ ಹೈಕಮಾಂಡ್ ಗಮನಹರಿಸಬೇಕು ಎಂದು ಮನವಿ ಮಾಡಿರುವುದಾಗಿ ತಿಳಿದು ಬಂದಿದೆ.
ವಿಧಾನ ಪರಿಷತ್ ನಾಮಕರಣ ಸಮಯದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಅಭಿಪ್ರಾಯಗಳಿಗೆ ಮನ್ನಣೆ ನೀಡಿಲ್ಲ ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾದ ಸುಧಾಮ್ ದಾಸ್ ಅವರಿಗೆ ನಾಮಕರಣ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿರುವುದಾಗಿ ಗೊತ್ತಾಗಿದೆ
ಇದೆ ವೇಳೆಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರ ಹಂಚಿಕೆ ಸಂಬಂಧಪಟ್ಟಂತೆ ಸಿದ್ದರಾಮಯ್ಯ ಬೆಂಬಲಿಗರ ವಿವಾದಿತ ಹೇಳಿಕೆಗಳಿಗೆ ಕಡಿವಾಣ ಹಾಕುವಂತೆ ಹೈಕಮಾಂಡ್ ಗೆ ಮನವಿ ಸಲ್ಲಿಸಿದ್ದಾರೆ. ಬುಧವಾರದಿಂದ ದೆಹಲಿ ಪ್ರವಾಸದಲ್ಲಿರುವ ಡಿ.ಕೆ.ಶಿವಕುಮಾರ್ ಕೂಡ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದಾರೆ.
ಈಗಾಗಲೇ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿಗಳು ಹಾಗೂ ನಾಯಕರುಗಳ ಜೊತೆ ನಡೆದಿರುವ ಚರ್ಚೆಯ ಪ್ರಕಾರ, ಡಿ.ಕೆ.ಶಿವಕುಮಾರ್ ಅಧಿಕಾರ ಹಂಚಿಕೆಯ ವಿರುದ್ಧ ರಾಜ್ಯ ಕಾಂಗ್ರೆಸ್‍ನಲ್ಲಿ ಯಾರೂ ಪ್ರತಿಕ್ರಿಯೆ ನೀಡದಂತೆ ಕಡಿವಾಣ ಹಾಕಲು ಮನವಿ ಮಾಡಿದ್ದಾರೆ.
ರಾಜ್ಯ ನಾಯಕರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ.ಅಧಿಕಾರ ಹಂಚಿಕೆ ಸೂತ್ರ ಎಂಬುದಿಲ್ಲ. ಸಿದ್ದರಾಮಯ್ಯ ಅವರೇ ಮುಂದಿನ 5 ವರ್ಷಗಳ ಕಾಲ ಪೂರ್ಣಾವಯ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ.ಇದರಿಂದ ಆಡಳಿತದಲ್ಲಿ ಹಾಗೂ ಸರ್ಕಾರದಲ್ಲಿ ಗೊಂದಲದ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಅಸಮಾಧನ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ಆಪ್ತರಾದ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ ಸೇರಿದಂತೆ ಅನೇಕ ಹಿರಿಯ ಸಚಿವರೆ ಈ ಬಗ್ಗೆ ಹೇಳಿಕೆ ನೀಡುತ್ತಿರುವ ಸರಿಯಲ್ಲ. ಹೈಕಮಾಂಡ್‍ನ ನಿರ್ಧಾರ ಗೌಪ್ಯವಾಗಿರಬೇಕು ಮತ್ತು ಸಾರ್ವಜನಿಕವಾಗಿ ಚರ್ಚಿಸುವ ವಿಷಯವಾಗಬಾರದು.ಸಚಿವರು ತಮಗೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಸರ್ಕಾರಕ್ಕೆ ಉತ್ತಮ ಹೆಸರು ತರುವ ಕೆಲಸ ಮಾಡುವುದರ ಜೊತೆಗೆ ಪಕ್ಷ ಸಂಘಟನೆಗೆ ಸಹಕಾರ ನೀಡಬೇಕು. ಅದನ್ನು ಬಿಟ್ಟು ಪಕ್ಷದ ಆಂತರಿಕ ವಿಚಾರಗಳ ಕುರಿತು ಅನಗತ್ಯ ಚರ್ಚೆ ಮಾಡಿ ವಿವಾದ ಸೃಷ್ಟಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ ಎಂದು ಹೇಳಲಾಗಿದೆ