ಬೆಂಗಳೂರು, ಸೆ.12 – ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯುವ ಲೆಕ್ಕಾಚಾರದಲ್ಲಿ ಬಿಜೆಪಿ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ತಮ್ಮ ಪುತ್ರನಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ವರಿಷ್ಠರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಈ ಹಿಂದಿನಿಂದಲೂ ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಉನ್ನತ ಹುದ್ದೆ ದೊರಕಿಸಿಕೊಡಲು ಪ್ರಬಲ ಲಾಬಿ ನಡೆಸುತ್ತಿರುವ ಯಡಿಯೂರಪ್ಪ ಅವರು ಇದೀಗ ಮೈತ್ರಿ ಪ್ರಸ್ತಾಪದ ಹಿನ್ನೆಲೆಯಲ್ಲಿ ಮತ್ತೆ ತಮ್ಮ ಪುತ್ರನ (Vijayendra) ಪರ ಬ್ಯಾಟಿಂಗ್ ಆರಂಭಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾಗಿರುವ ದೇವೇಗೌಡ,ಕುಮಾರಸ್ವಾಮಿ ಹಾಗೂ ಲಿಂಗಾಯತ ಸಮುದಾಯದ ಯಡಿಯೂರಪ್ಪ, ವಿಜಯೇಂದ್ರ ನಾಯಕತ್ವದಲ್ಲಿ ಸಂಘಟಿತ ಕೆಲಸ ಮಾಡಿದಲ್ಲಿ ಕನಿಷ್ಟ 22 ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರ ಯಡಿಯೂರಪ್ಪ ಅವರದ್ದಾಗಿದೆ.
ಈ ಎಲ್ಲಾ ಲೆಕ್ಕಾಚಾರ, ಜಾತಿವಾರು ಸಮೀಕರಣದ ಪಟ್ಟಿಯೊಂದಿಗೆ ಅವರು ನವದೆಹಲಿಗೆ ತೆರಳುತಿದ್ದು, ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ.
ನಾಳೆ ನವದೆಹಲಿಗೆ ತೆರಳಲಿರುವ ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯರು ಮತ್ತು ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ಜೊತೆ ಮಾತುಕತೆ ನಡೆಸಲಿದ್ದಾರೆ.
ಬಿಜೆಪಿ ಜೊತೆ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಲು ಖುದ್ದು ದೆಹಲಿ ನಾಯಕರೇ ಸಮ್ಮತಿಸಿರುವುದರಿಂದ ಸೀಟು ಹಂಚಿಕೆ, ಎಷ್ಟು ಕ್ಷೇತ್ರಗಳನ್ನು ಬಿಟ್ಟುಕೊಡಬೇಕು, ಯಾವ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿಯಬೇಕು, ಚುನಾವಣಾ ಕಾರ್ಯತಂತ್ರ, ಜಂಟಿ ಪ್ರಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಈ ವೇಳೆ ಚರ್ಚೆ ನಡೆಯಲಿದೆ ಎಂದು ಗೊತ್ತಾಗಿದೆ.
ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾದ ವೇಳೆ ನಡೆದ ಔಪಚಾರಿಕ ಮಾತುಕತೆಯಂತೆ ಜೆಡಿಎಸ್ಗೆ 28 ಲೋಕಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳನ್ನು ಬಿಟ್ಟುಕೊಡುವ ಬಗ್ಗೆ ಪ್ರಸ್ತಾವನೆ ಮಾಡಲಾಗಿತ್ತು.ಹಾಸನ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಇಲ್ಲವೇ ಕೋಲಾರ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಡುವ ಪ್ರಸ್ತಾವನೆ ಇಡಲಾಗಿತ್ತು.ಈ ಕ್ಷೇತ್ರಗಳ ಜೊತೆಗೆ ಹೆಚ್ಚುವರಿಯಾಗಿ ಜೆಡಿಎಸ್ ತುಮಕೂರು, ಮಂಡ್ಯ, ಹಾಸನ ಸೇರಿದಂತೆ ಆರು ಲೋಕಸಭಾ ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಟ್ಟರೆ ಉಳಿದ ಕಡೆ ನಮ್ಮ ಸಹಕಾರವಿರುತ್ತದೆ ಎಂದು ಅಮಿತ್ ಷಾ ಮುಂದೆ ದೇವೇಗೌಡರು ಹೇಳಿದ್ದಾಗಿ ತಿಳಿದುಬಂದಿತ್ತು.
ಈ ವಿಷಯವಾಗಿ ಯಡಿಯೂರಪ್ಪ ತಮ್ಮ ವಾದ ಮಂಡಿಸಲಿದ್ದು,ಇವರ ಅಭಿಪ್ರಾಯದ ನಂತರ ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.